Friday, 22 March 2013


ಈ ಜೀವ ನಿನ್ನದು ನೀನು ನನ್ನವಳು....

ಇನ್ನೂ ನನ್ನ ಜೊತೆ ಮಾತಡ್ಬೇಕು ಅಂತಾ ಅನ್ನಿಸ್ತಿಲ್ವಾ? ಅಥವಾ ಮಾತಾಡಬಾರ್ದು ಅಂತಾ ನಿರ್ಧರಿಸಿದ್ದಿಯಾ? ಇರಲಿ ಬಿಡು. ನಿನ್ನ ಸ್ವಭಾವ ಏನಂತ ಗೊತ್ತು. ನಿನ್ನ ಭಾವನೆಗಳನ್ನು ಕೆದಕಿದವನು ನಾನಲ್ಲವೇ? ಈಗ ಮಾತನಾಡು ಅಂದ್ರೇ.... ಸಾರಿ...! ನೀನು ಕೋಪಗೊಂಡಿರುವೆ ಅಂತ ಗೊತ್ತು. ಸಮಾಧಾನ ಹೇಳುವಷ್ಟು ಸಲುಗೆಯನ್ನು ಕಳೆದುಕೊಂಡಿರುವೆ. ಈಗೇಕೆ ನನ್ನ ಬಗ್ಗೆ ಯೋಚಿಸುತ್ತಿರುವೆ ಎಂದು ಮಾತ್ರ ಕೇಳಬೇಡ.

ಮತ್ತೇ ನಿನ್ನ ನೆನಪು ಯಾಕೆ ಮಾಡಿಕೊಂಡೇನೆಂದರೆ, ನಮ್ಮಿಬ್ಬರ ನಡುವಿನ ಪ್ರೇಮ ಮೈತ್ರಿ ಭಾವನೆಗಳನ್ನು ಬಿಚ್ಚಿಡಲು ಅಲ್ಲ. ಅಂತರಂಗದಲ್ಲಿ ಪ್ರೀತಿ ಮಹಲು ಕಟ್ಟಿದ್ದನ್ನು ನೆನಪಿಸಿಕೊಳ್ಳಲು ಅಲ್ಲ. ಯಾರ ಭಯವು ಇರದೆ ಕೈ ಕೈ ಹಿಡಿದು ಸಿಟಿಯನ್ನೇಲ್ಲ ಸುತ್ತಿದೇವಲ್ಲ ಅದನ್ನು ಹೇಳಲು ಅಲ್ಲ. ನಮ್ಮಿಬ್ಬರ ಮಧುರ ಪ್ರೀತಿಗೆ ಬೆಂಕಿ ಇಟ್ಟ ಆ ಸಮಯವನ್ನು ದೂಷಿಸಲು. ನನ್ನ ಪ್ರಾಮಾಣಿಕ ಪ್ರೀತಿಯ ತಿಳಿಸಲು.

ಆ ದಿನ ನಿನ್ನ ದುಃಖಭರಿತ ಭಾವನೆಗಳನ್ನು ನೋಡಿ ಒಂದು ಕ್ಷಣ, ನಾನು ಕ್ರೂರಿಯಾದನೇನೋ ಎಂದು ಅನ್ನಿಸಿತು. ಮುಂದಾಲೋಚನೆ ಇಲ್ಲದ ಮಾತುಗಳು, ಎಷ್ಟೇಲ್ಲ ನೋವಿಗೆ ಕಾರಣವಾಗುತ್ತವೆ ಎಂದು ಆಗಲೇ ಗೊತ್ತಾಗಿದು. ಇಲ್ಲಿಯವರೆಗೂ ಪ್ರಾಮಾಣಿಕ ಪ್ರೇಮಿ ಎಂದು ಹೇಳುತ್ತಿದ್ದೆ. ಆದರೆ, ಆ ಗಳಿಗೆಯಲ್ಲಿ ಮಾತಿನ ಮೇಲೆ ಸ್ಥಿಮೀತತೆಯನ್ನು ಕಳೆದುಕೊಂಡು ಬಿಟ್ಟಿದ್ದೆ. ಮಂಜು, ನನ್ನಿಂದ ಆ ರೀತಿಯ ಮಾತುಗಳು ಹೊರಡಲು ನಿನ್ನ ಮೇಲಿನ ಅತೀಯಾದ ವ್ಯಾಮೋಹವೆ ಕಾರಣ.

ನೆನಪಿದೆಯಾ. ನಿನ್ಯಾವಾಗಲೂ ಮನತಣಿಸಲೆಂದು ಹಾಡುತ್ತಿದ್ದೀಯಲ್ಲ, ನೂರು ಜನ್ಮಕ್ಕೂ ನೂರಾರು ಜನ್ಮಕ್ಕೂ ಒಲವಧಾರೆ ನೀ ಒಲೆದೊಲೆದು ಬಾರೇ ನೀ... ಆ ಹಾಡು ಇನ್ನೂ ಕಿವಿಯಲ್ಲಿ ಗುನುಗುತ್ತಿದೆ. ನಾವಿಬ್ಬರೂ ನೂರು ಕಾಲ ಜೊತೆಗಿರೋಣ ಅಂತ ಆಣೆ, ಪ್ರಮಾಣ ಮಾಡಿದ್ವಿ. ಆದ್ರೆ, ನನ್ನಿಂದ ಉಳಿಸಿಕೊಳ್ಳೊದಕ್ಕೆ  ಸಾಧ್ಯವಾಗಲಿಲ್ಲ. ಅದರಿಂದಾನೆ ನೀನು ಬಿಟ್ಟುಬಿಡದೆ ಜಗಳವಾಡಿದೆ. ನಾನು ನಿನಗೆ ಮೊದಲೆ ನನ್ನೆಲ್ಲ ವಿಷಯ ಹೇಲಿದ್ದೆ ಅಲ್ವಾ. ಎಂಗೇಜ್ಮೆಂಟ್ ಆಗಿದ್ದು ಕೂಡಾ. ಆದ್ರೂ ನೀನು ತುಂಬಾ ಇಷ್ಟಾ ಪಟ್ಟೆ. ಪ್ರೀತಿ ಎಂಬುದೆ ಗೊತ್ತಿಲ್ಲದ, ನನ್ನ ಮನಸ್ಸಿನಲ್ಲಿ ಪ್ರೀತಿಯ ಭಾವನೆಗಳು ಚಿಗುರೊಡೆಯುವಂತೆ ಮಾಡಿದೆ. ಪ್ರೀತಿಯ ಸಿಹಿಭೋಜನ ಉಣಿಸಿದೆ. ಎಂದೂ ಗೊತ್ತೆ ಇರದ ಅಪ್ಪುಗೆ ನನ್ನಲ್ಲಿ ಬದಲಾವಣೆಯ ಗಾಳಿಯನ್ನೆ ಬೀಸಿತು.

"ಏಯ್..! ಕುಳ್ಳ ನೀ ನಂಗೆ ತುಂಬಾ ಇಷ್ಟಾ ಕಣೋ. ನಿನ್ನ ಬಿಟ್ಟು ಬದುಕೋ ಶಕ್ತಿ ಇಲ್ಲಾ ಲೇ. ನಮ್ಮ ಅಪ್ಪ ಅಮ್ಮಂಗೆ ಒಪ್ಪಸ್ತೇನಿ. ನನ್ನೆ ಮದ್ವೆ ಆಗೋ. ಅಂತೆಲ್ಲ ಪರಿ ಪರಿ ಕೇಳಿದ್ದಿ." ಆದ್ರೆ, ನಾನೊಬ್ಬ ಮೋಸಗಾರ ಅಂತ ನಿರೂಪಿಸಿ ಬಿಟ್ಟೆ. ನಿನ್ನ ಪ್ರೀತಿ, ನಂಬಿಕೆ, ವಿಶ್ವಾಸ ಉಳಿಸಿಕೊಳ್ಳದ ನಿರ್ಧಯಿ ಪ್ರೇಮಿಯಾದೆ. ಕ್ಷಮಿಸು...! ನಂಗೂ ಒಂದ್ ಮನಸ್ಸಿದೆ. ಅರ್ಥ ಮಾಡಿಕೋ. ನಾನೂ ಕೂಡಾ ಮನಸಾರೇ ಪ್ರೀತಿಸಿದೆ. ಸಂದರ್ಭದ ಸುಳಿಗೆ ಸಿಲುಕಿ ಏನೆಲ್ಲ ಸಂಭವಿಸಿತು.

ಮಂಜು, ಈಗ ತಪ್ಪಿನ ಅರಿವಾಗಿದೆ. ಸಂತೋಷದಿಂದ ಒಪ್ಪಿರುವೆ. ಮತ್ತು ಮನಪೂರ್ವಕ ನಿರ್ಧರಿಸಿರುವೆ. ನನ್ನ ಜೀವನವನ್ನ ನಿನ್ನ ಜೊತೆನೆ ಹಂಚಿಕೊಳ್ಳಬೇಕೆಂದು. ನಾನು ಕೂಡಾ ಸಂಪ್ರದಾಯಕ್ಕೆ ಇನ್ನು ಬೆಲೆ ಕೊಡಲಾರೆ. ನೆಮ್ಮದಿನೇ ಇಲ್ಲ ಅಂದ ಮೇಲೆ ಬೇರೊಬ್ಬರೊಡನೆ ಬದುಕುವದರಲ್ಲಿ ಅರ್ಥವಿಲ್ಲ. ನಿನಗೆ ಹಾಗೆಲ್ಲ ಹೇಳಿ ಮನಸ್ಸು ನೋಯಿಸಿರುವೆ. ಕ್ಷಮಿಸು. ಇನ್ನೆಂದು ನಿನ್ನ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳುವೆ. ನನ್ನ ಬದುಕಿನ ಅರ್ಧಭಾಗ ನೀನು. ನನ್ನ ಜೀವವಿರುವವರೆಗೂ ನನ್ನ ಕಣ್ಣ ರೆಪ್ರೆಯ ಹಾಗೆ ಜೋಪಾನ ಮಾಡುವೆ. ಕೊನೆಯವರೆಗೂ ಈ ಜೀವ ನಿನ್ನದು. ನೀನು ನನ್ನವಳು...!




  • ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ 
  • ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ